ಎಲುನೇರ್ಪಿಕ ಶಸ್ತ್ರವೈದ್ಯ (ಅಸ್ಥಿ ವಿಜ್ಞಾನ): ಎಲುಬು, ಕೀಲು, ಅವುಗಳಿಗೆ ಸಂಬಂಧಿಸಿದ ಸ್ನಾಯು ಕಂಡರ ಹುರಿ, ನರ ಮತ್ತು ಇನ್ನಿತರ ಊತಕಗಳ ಸಹಜ ಆರೋಗ್ಯ ಕಾಪಾಡಿಕೊಳ್ಳಲು, ಅವುಗಳ ರಚನೆ ತಿಳಿದು ನಿಜಗೆಲಸಗಳನ್ನು ಅರಿತು ಕೊಳ್ಳುವ ವಿಜ್ಞಾನವೇ ಅಸ್ಥಿವಿಜ್ಞಾನ. ಇಂದಿನ ದಿನಗಳಲ್ಲಿ ಅಸ್ಥಿವಿಜ್ಞಾನವು ಬೃಹತ್ತಾಗಿ ಬೆಳೆದಿದೆ. ವಿಜ್ಞಾನದ ಎಲ್ಲ ಶಾಖೆಗಳು ಬೆಳೆದು ಅಸ್ಥಿ ವಿಜ್ಞಾನ ಬೆಳೆಯಲು ಅನುವು ಮಾಡಿಕೊಟ್ಟಿದೆ. ಅಸ್ಥಿವಿಜ್ಞಾನಕ್ಕೆ ಇಂಗ್ಲಿಷಿನಲ್ಲಿ ಆರ್ಥೋಪೆಡಿಕ್ಸ್‌ ಎನ್ನುವ ಹೆಸರಿದೆ. ಇದು ಗ್ರೀಕ್ ಭಾಷೆಯಿಂದ ಬಂದಿದ್ದು. ಆರ್ಥೋ ಅಂದರೆ ನೇರ ಮತ್ತು ಪೆಡಿಯಾ ಅಂದರೆ ಮಗು. ಸೊಟ್ಟಗಿರುವ ಮಕ್ಕಳನ್ನು ನೇರಗೊಳಿಸುವ ವಿಜ್ಞಾನವೆಂದು ಆರ್ಥೋಪೆಡಿಕ್ಸ್‌ ಆಯಿತು. ಆದರೆ ಬರೀ ಮಕ್ಕಳನ್ನಷ್ಟೇ ಅಲ್ಲ ಎಲ್ಲ ವಯಸ್ಸಿನವರ ಮೂಳೆಯ ರೋಗಗಳನ್ನು, ನ್ಯೂನತೆಯನ್ನು ಸರಿಪಡಿಸುವುದು ಅಸ್ಥಿಶಸ್ತ್ರಜ್ಞನ ಕೆಲಸ.

ಪ್ಯಾರಿಸ್ ವಿಶ್ವವಿದ್ಯಾಲಯದ ವೈದ್ಯ ವಿಜ್ಞಾನ ಪ್ರಾಧ್ಯಾಪಕ ನಿಕೊಲಾಸ್ ಆಂಡ್ರೆ 1241 ರಲ್ಲಿ ಅಸ್ಥಿವಿಭಾಗವನ್ನು ಆರ್ಥೋಪೆಡಿಕ್ಸ್‌ ಅಂತಕರೆದದ್ದು ಇಂದಿಗೂ ಬಳಕೆಯಲ್ಲಿ ಉಳಿದಿದೆ. 18ನೆಯ ಶತಮಾನದಲ್ಲಿ ಮಕ್ಕಳ ಕೈಕಾಲುಗಳ ಸೊಟ್ಟು, ಊನಗಳನ್ನು ಸರಿಪಡಿಸಲೋಸುಲು ಸ್ವಿಟ್ಜರ್ಲೆಂಡಿನಲ್ಲಿ ಒಂದು ಸಂಸ್ಥೆ ಪ್ರಾರಂಭಿಸಲಾಯಿತು. ವಿಲಿಯಂ ಹಂಟರ, ಅವರ ತಮ್ಮ ಜಾನ ಹಂಟರ ಇರ್ವರೂ ಮೂಳೆಗಳ, ಕೀಲುಗಳ ರಚನೆ, ಕಾರ್ಯ, ಬೆಳೆವಣೆಗೆಗಳ ಬಗ್ಗೆ ವಿವರವಾದ ಅಭ್ಯಾಸ ಮಾಡಿ ವಿವರಿಸಿದ್ದಾರೆ. ಜಾನ ಹಿಲ್ಟನ್ (1804-1878) ಅಸ್ಥಿ ವಿಜ್ಞಾನದ ಪುಸ್ತಕ ಬರೆದವರಲ್ಲಿ ಪ್ರಮುಖ. ಚಿಕಿತ್ಸೆಯಲ್ಲಿ ಅಂಗಭಾಗದ ವಿಶ್ರಾಂತಿಯ ಮಹತ್ವ ಇದರಲ್ಲಿ ತಿಳಿಸಿದೆ. ಜರ್ಮನಿಯ ಸ್ಟ್ರೋಮೆಯರ (1804-1876) ಹೊರಕಾರಣದ ಕೀಲುಗಟ್ಟುವಿಕೆ ನಿವಾರಿಸಲು ಕಂಡರ ಕೋಯ್ಸಿಳಿಕೆ (ಟಿನಟೊಮಿ) ವಿಧಾನ ಜಾರಿಗೆ ತಂದನು. ಈಗಲೂ ಮುರಿದ ಕಾಲಿನ ಚಿಕಿತ್ಸೆಯಲ್ಲಿ ಬಳಸುವ ಸಳಾಕೆಯ ದಬ್ಬೆಯನ್ನು “ಹಗ್ ಒವೆನ್ಥಾಮಸ್” ಕಂಡು ಹಿಡಿದು ಬಳಸಿದ ಕೀರ್ತಿಗೆ ಭಾಜನ ನಾಗಿದ್ದಾನೆ. ಅಸ್ಥಿವಿಜ್ಞಾನಕ್ಕೆ ವ್ಶೆಜ್ಞಾನಿಕ ತಳಹದಿ ನೀಡಿದವರಲ್ಲಿ ಥಾಮಸ್ ಮೊದಲಿಗ. ನಂತರ ಸರ್ ರಾಬರ್ಟ ಜೋನ್ಸ್‌ (1858-1933) ಸಾಧನೆಗಳು ಭದ್ರ ಅಡಿಪಾಯ ಒದಗಿಸಿತು. ಮೊದಲನೆ ಮತ್ತು ಎರಡನೆ ಮಹಾಯುದ್ಧಗಳಲ್ಲಿ ಸಂಭವಿಸಿದ ಭಯಾನಕ ಮನ ಕಲಕುವ ಘೊರಗಾಯಗಳನ್ನು ಉಪಚರಿಸುವಾಗ ವ್ಶೆದ್ಯರಿಗೆ ಹೊಸ ಹೊಸ ಚಿಕಿತ್ಸೆ ನೀಡುವ ಮಾರ್ಗೊಪಾಯಗಳು ತೆರೆದವು. ಅದರ ಸದುಪಯೋಗದಿಂದಾಗಿ ಇಂದು ಅಸ್ಥಿ ವಿಜ್ಞಾನ, ವೈದ್ಯ ವಿಜ್ಞಾನ ಕ್ಷೇತ್ರದಲ್ಲಿ ವಿಭಾಗವಾಗಿ ಬೆಳೆಯಲು ಸಾಧ್ಯವಾಗಿದೆ. 
ಗಾಯಗಳ ಚಿಕಿತ್ಸೆ: ಎಲುಬು ಮುರಿದ ಗಾಯಗಳಲ್ಲಿ ಮುಖ್ಯವಾಗಿ ಎರಡು ವಿಧಗಳು ಒಂದು ಮುಚ್ಚಿದ ಮುರಿತ; ಇದರಲ್ಲಿ ಚರ್ಮಕ್ಕೆ ಗಾಯವಾಗಿರುವುದಿಲ್ಲ. ಇನ್ನೊಂದು ತೆರೆದ ಮುರಿತ; ಇದರಲ್ಲಿ ಚರ್ಮಕ್ಕೆಗಾಯವಾಗಿ, ಮುರಿದೆಲುಗಳ ತುದಿಗಳು ಹೋರಭಾಗಕ್ಕೆ ಸಂಪರ್ಕ ಪಡೆಯುತ್ತವೆ. ಮುಚ್ಚಿದ ಮುರಿತಕ್ಕೆ ಸರಳ ಮುರಿತವೆಂದೂ ಕರೆಯುತ್ತಾರೆ. ಕಾರಣ ಅದರ ಚಿಕಿತ್ಸೆ ಸರಳ. ಇಲ್ಲಿ ಶಸ್ತ್ರಕ್ರಿಯೆ ಅಪರೂಪಕ್ಕೆ ಬೇಕಾಗುತ್ತದೆ. ಮುರಿದು ಸರಿದದ್ದನ್ನು ಅರಿವಳಿಕೆಯ ಸಹಾಯದಿಂದ ಸರಿ ಕೂಡಿಸುತ್ತಾರೆ. ನಂತರ ಅದು ಮತ್ತೆ ಸರಿಯದಂತೆ ಗಚ್ಚಿನ ದಬ್ಬೆ ಇಲ್ಲವೆ ಅಚ್ಚಿನಲ್ಲಿ ಹಿಡಿದಿಡುತ್ತಾರೆ. ಎಲುವು ಕೂಡಿಕೊಳ್ಳಲು ಕೆಲವು ವಾರಗಳೇ ಬೇಕಾಗುತ್ತದೆ. 

ತೆರೆದ ಮುರಿತದಲ್ಲಿ ಚರ್ಮಕ್ಕೆ ಗಾಯವಾಗಿ ಬಾಹ್ಯ ಸಂಪರ್ಕ ಹೊಂದಿರುವುದರಿಂದ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಸೋಂಕು ತಗುಲದಂತೆ ಗಾಯ ಮಾಯಬೇಕು. ಅದೇ ಸಮಯದಲ್ಲಿ ಮುರಿದೆಲುಬು ಸರಿಕೂಡಿಸಿ ಹಿಡಿದಿಟ್ಟು ಎಲುಬು ಕೂಡಿಕೊಳ್ಳಲು ಅನುವು ಮಾಡಿ ಕೊಡಬೇಕು. ಇದು ಸರಳವಲ್ಲ. ಶಸ್ತ್ರಕ್ರಿಯೆ ಬೇಕಾಗುತ್ತದೆ. ಸ್ಪಚ್ಛತೆ, ರೋಗಾಣು ರಹಿತತೆ, ಜೀವಿರೋಧಕ ಔಷಧ, ಸಕಲ ಸೌಕರ್ಯಯುಕ್ತ ಶಸ್ತ್ರಕ್ರಿಯಾ ಮಂದಿರ, ಜೀವಕ್ಕಪಾಯವಾಗದ ಅರಿವಳಿಕೆ ನುರಿತ ದಾದಿಯರು ಕಲಾತ್ಮಕವಾಗಿ ಶಸ್ತ್ರ ಕ್ರಿಯಾ ಪರಿಣಿತ ವೈದ್ಯರುಗಳೆಲ್ಲ ಲಭ್ಯವಿದ್ದಾಗಲೂ ತೆರೆದ ಮುರಿತದ ಚಿಕಿತ್ಸೆ ಕಷ್ಟವೆನಿಸಬಹುದು. ಆದರೆ ಅಂದಿನ ದಿನಗಳನ್ನು ನೆನೆಸಿಕೊಂಡರೆ ಇಂದು ಸಾಧಿಸಿದ್ದು ಬಹಳವಿದೆ. 

ಎಲುಬು ಮುರಿದು ಮುರಿದೆಲುಬು ಸರಿದಾಗ ಅವುಗಳನ್ನು ಸರಿಕೂಡಿಸಬೇಕು. ಇದನ್ನು ಅರಿವಳಿಕೆಯಲ್ಲಿ ಸಹಾಯಕರ ಸಹಯೋಗದೊಂದಿಗೆ ಸಾಧಿಸಬೇಕಾಗುತ್ತದೆ. ಇಲ್ಲಿ ಎಲುಬುಗಳು ನೇರವಾಗಿ ಕಾಣುವುದಿಲ್ಲ ಚರ್ಮ, ಸ್ನಾಯು, ಕಂಡರಗಳ ಅಡಿಯಲ್ಲಿರುವ ಮುರಿದ ಮೂಳೆಯ ತುಂಡುಗಳ ಚಿತ್ರ ಎಕ್ಸರೇ ಚಿತ್ರದಲ್ಲಿ ಕಂಡು, ಕೈಯಿಂದ ನೇವರಿಸುತ್ತ ಅಂದಾಜಿನ ಮೇಲೆ ಸರಿಸುತ್ತ ಸರಿಕೂಡಿಸಬೇಕಾಗುತ್ತದೆ. ಒಂದು ಸಮಯ ಇಂತಹ ಕೂಡಿಸುವ ಪದ್ದತಿಯಿಂದ ಸರಿಪಡಿಸಲು ಸಾಧ್ಯವಾಗದಿದ್ದರೆ ಶಸ್ತ್ರಕ್ರಿಯೆ ಮಾಡಿ ಮುರಿದೆಲುವುಗಳನ್ನು ಕಣ್ಣಾರೆಕಂಡು, ಕೈಯಿಂದ (ಸಾಧನಗಳನ್ನು ಬಳಸಿ) ಸರಿ ಕೂಡಿಸಬೇಕಾಗುತ್ತದೆ. ಹೀಗೆ ಸರಿಕೂಡಿಸಿದ್ದನ್ನು ಮತ್ತೇ ಜಾರದಂತೆ ಒಳ ಜೋಡಣೆಯಿಂದ ಹಿಡಿದಿಡಬೇಕಾಗುತ್ತದೆ. ಒಳ ಜೋಡಣೆಗಾಗಿ ಅನೇಕ ವಿವಿಧ ಸಾಧನೆಗಳಿವೆ. ಒಳೆಲುಮಾಳೆ, ತೂತುತಟೆಕ ತಿರುವುಮೊಳೆ, 

ತಂತಿ, ಒಳೆಲುಮೊಳೆ ಒಳಹಿಡಿತ (ಇಂಟರ್ಲಾಕಿಂಗ್ ನೇಲ್) ಗಳನ್ನು ಬಳಸಬಹುದು. ಲೋಹದ ಈ ಸಾಧನಗಳು ‘ಜಡ’ ಗುಣಹೊಂದಿದ್ದು ತುಕ್ಕು ಹಿಡಿಯುವುದಿಲ್ಲ, ವಿದ್ಯುತ್ ಚೋದನೆಗೆ ಪ್ರತಿಕ್ರಿಯಿಸುವುದಿಲ್ಲ ಮತ್ತು ಸೋಂಕಿಗೆ ಕಾರಣವಾಗುವುದಿಲ್ಲ. ಕೆಲವೊಮ್ಮೆ ಒಳ ಜೋಡಣೆ ಮಾಡುವುದು ಹಿತಕರವೆನಿಸುವುದಿಲ್ಲ. ಆಗ ಮುರಿತದಿಂದ ಸ್ಪಲ್ಪ ಕೆಳಗೆ ಹಾಗೂ ಮೇಲೆ ಎರಡೆರಡು ಉದ್ದುದ್ದ ಮೊಳೆಗಳನ್ನು ಎಲುಬಿನೊಳಗಿಂದ ತೂರಿಸಿ ಅವುಗಳನ್ನು ಹೊರಭಾಗದಲ್ಲಿ ದೃಢವಾದ ಸಲಕರಣಿಗಳಿಂದ ಹಿಡಿದಿಡುವುದಿದೆ. ಹೀಗೆ ಹಿಡಿದಿಟ್ಟರೆ ಸರಿ ಕೂಡಿಸಿದೆಲುಬು ಸರಿಯುವುದಿಲ್ಲ ಮತ್ತು ಚರ್ಮದ ಗಾಯಕ್ಕೆ ಪಟ್ಟಿ ಮಾಡಲು ಸರಳವಾಗುತ್ತದೆ. ಇದಕ್ಕೆ ಹೊರ ಹಿಡಿತವೆನ್ನುತ್ತಾರೆ. ಒಳಹಿಡಿತ ಇಲ್ಲವೆ ಹೊರಹಿಡಿತದಿಂದಾಗಿ ಚಿಕಿತ್ಸೆಗೊಳಪಟ್ಟ ವ್ಯಕ್ತಿ ತನ್ನ ಗಾಯದ ಅಂಗವನ್ನು ಕೂಡಲೆ ಅಲುಗಾಡಿಸುತ್ತಿರಲು ಸಾಧ್ಯವಾಗುತ್ತದೆ, ಸಹಾಯದಿಂದ ನಡೆದಾಡಲು ಬರುತ್ತದೆ. ಪ್ಲ್ಯಾಸ್ಟರ್ ಅಚ್ಚಿದಲ್ಲಿ ವಾರ, ತಿಂಗಳುಗಟ್ಟಲೆ ಕಾಲ ಕಳೆಯುವುದು ಇಲ್ಲವಾಗುತ್ತದೆ. ಹೀಗೆ ಗಾಯಗಳ, ಮುರಿತಗಳ ಮತ್ತು ಕೀಲತಪ್ಪಿಕೆಗಳ ಚಿಕಿತ್ಸೆಯಲ್ಲಿ ಅಸ್ಥಿ ವಿಜ್ಞಾನ ವೈಜ್ಞಾನಿಕವಾಗಿ ಬಹಳ ಬೆಳೆದಿದೆ ಹಾಗೂ ಉತ್ತಮ ಫಲನೀಡುತ್ತಿದೆ. 
ವಯಸ್ಸಾದ ಹಿರಿಯರ ಎಲುಬುಗಳು ಮೆತ್ತಗಾಗಿರುವುದರಿಂದ ಸ್ಪಲ್ಪ ಪ್ರಮಾಣದ ಪೆಟ್ಟಿನಿಂದಾಗಿ ಮುರಿಯುತ್ತವೆ. ಇವರ ತೊಡೆಯೆಲುಬು ಕತ್ತು (ಫಿಮೋರಲ್ ನೆಕ್) ಮುರಿಯುವುದು ಬಹಳ ಸಾಮಾನ್ಯ. ತೊಡೆಯೆಲಬು ಕತ್ತು ಮುರಿದರೆ ನಡೆಯಲು ಆಗುವುದಿಲ್ಲ. ಬಿದ್ದಲ್ಲೇ ಬಿದ್ದಿರಬೇಕಾಗಿರುತ್ತದೆ. ಈ ಮುರಿತ ಸರಿ ಹೊಂದುವುದು ಕಷ್ಟ ಸಾಧ್ಯ. ಹೀಗಾಗಿ ಜೀವನದ ಕೊನೆಯವರೆಗೂ ಅನುಭವಿಸುವುದು ಅನಿವಾರ್ಯವಾಗಿತ್ತು. ಆದರೆ ವೈಜ್ಞಾನಿಕ ಪ್ರಗತಿಯಿಂದ ಇಂತವರ ತೊಡೆಯಲು ಕತ್ತನ್ನು ಕೊಯ್ತೆಗೆದು ಅದನ್ನು ಉಕ್ಕಿನಿಂದ ತಯಾರಿಸಿದ ತದ್ರೂಪ ಕತ್ತನ್ನು ಅಳವಡಿಸುವ ಶಸ್ತ್ರ ಕ್ರಿಯೆ ಕೈಕೊಂಡರೆ ವ್ಯಕ್ತಿ ಮೂರನೇ ದಿನಕ್ಕೆ ಎದ್ದು ಓಡಾಡಲು ಸಾಧ್ಯವಾಗುತ್ತದೆ. 

ಕೀಲು ರೋಗಗಳಲ್ಲಿ : ರುಮಟಾಯ್ಡ್‌ ಕೀಲುರಿತದಿಂದ ಇಲ್ಲವೆ ಮುಪ್ಪಿನಿಂದಾಗಿ ಪಡೆವ ಎಲುಗೀಲುರಿತದಲ್ಲಿ ಕೀಲಿನ ಎಲಬುಗಳು ಸವೆದು ನೋವಾಗುತ್ತದೆ. ಕೀಲು ಅಂದಗೆಡುತ್ತದೆ. ಮಂಡಿಕೀಲಿನಲ್ಲಿ ಇಲ್ಲವೆ ಚಪ್ಪೆಕೀಲಿನಲ್ಲಿ ಇದು ಉಂಟಾದರೆ ಕಂಡರೆ ಕೂಡಲು, ಏಳಲು, ನಡೆಯಲು ಬಹಳ ತೊಂದರೆಯಾಗುತ್ತವೆ. ಕೀಲುಗಟ್ಟುವ ಶಸ್ತ್ರಕ್ರಿಯೆಯಿಂದ ಕೀಲಿನ ಚಲನೆ ಇಲ್ಲವಾಗಿ ದಿನದ ಆಗುಹೋಗುಗಳು ಕಷ್ಟದಾಯಕವಾಗುತ್ತದೆ. ಆದರೆ ಕೃತಕ ಕೀಲು ಅಳವಡಿಸುವುದರಿಂದಾಗಿ ವ್ಯಕ್ತಿ ನೋವಿಲ್ಲದ ಕೀಲು, ಮತ್ತು ಚಲನಾ ಸಹಿತದ ಬದುಕು ಬಾಳುವಂತಾಗಿದೆ. ಚಪ್ಪೆ ಕೀಲಿನಲ್ಲಿ ಮತ್ತು ಮಂಡಿ ಕೀಲಿನಲ್ಲಿ ಪುರ್ಣ ಕೃತಕ ಕೀಲು (ಟೋಟಲ್ ರಿಪ್ಲೇಸ್ಮೆಂಟ್ ಆಫ್ ಜಾಯಿಂಟ್) ಜೋಡಿಸುದನ್ನು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಆದರೆ ಉಳಿದ ಕೀಲುಗಳಲ್ಲಿ ಇದರ ಬಳಕೆಯ ಪ್ರಯೋಗ ನಡೆದಿದೆ. 

ಸೋಂಕುರೋಗಗಳು ಕೀಲನ್ನಾವರಿಸಿದರೆ ಕೀಲು ಪುರ್ಣ ಹಾಳಾಗುತಿತ್ತು ಆದರೆ ಹೊಸ ಹೊಸ ಪ್ರಬಲ ಜೀವಿರೋಧಕ ಔಷಧಗಳ ಸಂಶೋಧನೆ ಮತ್ತು ಬಳಕೆಯಿಂದಾಗಿ ಕೀಲು ಕೀವಿನಿಂದ ಹಾಳಾಗುವುದು ತಪ್ಪಿದೆ. ಹಾಗೆ ಒಂದು ಸಮಯ ಹಾಳಾದರೆ ನೋವು ಇಲ್ಲದಂತೆ ಮಾಡಲು ಕೀಲುಗಟ್ಟುವ ಶಸ್ತ್ರಕ್ರಿಯೆ ಕೈಕೊಳ್ಳಬಹುದು. ಇಲ್ಲವೆ ಪುರ್ಣ ಕೃತಕ ಕೀಲು ಜೋಡಣೆ ಮಾಡಬಹುದು. 

ಕೀಲುದರ್ಶಕ : ಉದರದೊಳಗೆ ನಳಿಕೆತೂರಿಸಿ ಅದರ ಮೂಲಕ ಸಂತಾನ ಹರಣ ಶಸ್ತ್ರಕ್ರಿಯೆ, ಮಾಡುವುದರಿಂದ ಪ್ರಾರಂಭವಾದ ಉದರದರ್ಶಕ ವಿಧವ ಹೊಟ್ಟೆಯೊಳಡಗಿದ ಅನೇಕ ರೋಗಗಳನ್ನು ಪತ್ತೆ ಹಚ್ಚಿ ಶಸ್ತ್ರ ಕ್ರಿಯಾಚಿಕಿತ್ಸೆ ಮಾಡುವಲ್ಲಿ ಯಶಸ್ಸು ಪಡೆದಿದೆ. ಅಂತಹದೇ ಯಂತ್ರ ಸಹಾಯದಿಂದ ಕೀಲೊಳಗೆ ನಳಿಕೆತೂರಿಸಿ ಅದರ ಮೂಲಕ ಕೀಲೊಳಗಿನ ಎಲ್ಲ ಭಾಗಗಳನ್ನೂ ವೀಕ್ಷಿಸಿ ದೋಷ ಕಂಡು ಅದನ್ನು ಸರಿಪಡಿಸಲು ಸಾಧ್ಯವಾಗಿದೆ. ಮುಖ್ಯವಾಗಿ ಮಂಡಿ ಕೀಲಿನಲ್ಲಿ ಅರ್ಧ ಚಂದ್ರಾಕಾರದ ಮೆಲ್ಲೆಲುವಿನ ತಟ್ಟೆಗಳ ಹರಿತ; ಹಿಂದು ಮುಂದಿನ ಅಡ್ಡಡ್ಡ ಹುರಿಗಳಗಾಯ; ಕೀಲೊಳುಪರೆಯ ರೋಗ; ಮೆಲ್ಲೆಲುವಿನ ನ್ಯೂನತೆ ಸರಿಪಡಿಸಲು ಕೀಲುದರ್ಶಕ ಶಸ್ತ್ರಕ್ರಿಯೆ ಅತ್ಯಂತ ಫಲಕಾರಿಯಾಗಿದೆ. ಸಾದಾ ಶಸ್ತ್ರಕ್ರಿಯೆಯಲ್ಲಿ ಹಲವಾರು ವಾರಗಳಷ್ಟು ವಿಶ್ರಾಂತಿ ಬೇಕಾಗುತಿತ್ತು. ಆದರೆ ಕೀಲುದರ್ಶಕದ ಮೂಲಕ ಶಸ್ತ್ರಕ್ರಿಯೆ ಮಾಡಿಸಿಕೊಂಡ ಮರುದಿವಸದಿಂದಲೇ ವ್ಯಕ್ತಿ ಓಡಾಡುತ್ತಿರಲು ಸಾಧ್ಯವಿದೆ. 

ಸಿ-ತೋಳಿನ ವಿಶಾಲದರ್ಶಕ (ಚಿತ್ರ - 6) ಇಂಗ್ಲಿಷ್ ಅಕ್ಷರ ಸಿ ನಂತೆ ತೋಳು ಹೊಂದಿದ ಈ ವಿಶಿಷ್ಟ ಎಕ್ಸ್‌ಕಿರಣಗಳ ಯಂತ್ರದಿಂದ ತೆಗೆದ ಚಿತ್ರವನ್ನು ಮಗ್ಗುಲಿನಲ್ಲಿರುವ ದೂರದರ್ಶನದ ಪರದೆಯ ಮೇಲೆ ಕಾಣಬಹುದು. ಅಪ್ಪಿಕೊಳ್ಳುವಂಥ ತೋಳಿರುವುದ ರಿಂದ ಯಾವುದೇ ಅಂಗ ಭಾಗವನ್ನು ಅಲುಗಾಡಿಸದೆ ಯಂತ್ರವನ್ನು ತಿರುಗಿಸುತ್ತ ನೇರ ಹಾಗೂ ಮಗ್ಗುಲ ಚಿತ್ರಗಳನ್ನು ಕಾಣಬಹುದು. ಇದರಿಂದಾಗಿ ಎಲುಬು ಮುರಿತಗಳ ಚಿಕಿತ್ಸೆ ಬಹಳ ಸರಳವಾಗಿದೆ. ಚರ್ಮ ಕೊಯ್ಯದೆ ಅತ್ಯಲ್ಪ ಚಿಕ್ಕಗಾಯದ ಮೂಲಕ ಮುರಿದೆಲುವನ್ನು ಸರಿಕೂಡಿಸಿ, ಕೂಡಿಸಿದ್ದನ್ನು ಖಚಿತ ಪಡಿಸಿಕೊಂಡು ಒಳಹಿಡಿತ ಸಾಧಿಸಲು ಸಾಧ್ಯವಾದುದರಿಂದ ಅತ್ಯಂತ ಭಯಾನಕ ವೆನಿಸುವ ತೊಡೆ ಎಲಬು ಮುರಿತದ ರೋಗಿ ಸಹ ಅಲ್ಪ ಸ್ವಲ್ಪ ಸಹಾಯದಿಂದ ಕೂಡಲೇ ನಡೆದಾಡಲು ಸಾಧ್ಯವಾಗಿದೆ. ಆಸ್ಪತ್ರೆಯಲ್ಲಿ ಕಳೆಯುವ ದಿನಗಳು; 

ನೋವಿನಿಂದ ಬಳಲುವ ಸಮಯ, ಮತ್ತು ಒಟ್ಟು ಖರ್ಚು ಕಡಿಮೆಯಾಗಿ; ದೈಹಿಕವಾಗಿ ಬೇಗನೇ ಚೇತರಿಸಿಕೊಂಡು ಮಾನಸಿಕ ಉಲ್ಲಾಸದಿಂದಿರಲು ಇಂದಿನ ವ್ಯೆಜ್ಞಾನಿಕ ಬೆಳೆವಣಿಗೆಯು ಸಹಾಯಕಾರಿ ಯಾಗಿದೆ. ಬೆನ್ನೆಲುಬಿನ ತಟ್ಟೆಯ ಸರಿತದಂತಹ ಸಮಸ್ಯೆಯನ್ನು ನಳಿಕೆಯ ಮುಖಾಂತರ ಶಸ್ತ್ರಕ್ರಿಯೆ ಕೈಕೊಂಡು ಅತ್ಯಂತ ಹರ್ಷದಾಯಕ ಫಲ ಪಡೆಯಲು ಸಾಧ್ಯವಾಗಿದೆ. 
ಇವುಗಳಲ್ಲದೆ ಸಂಜಾತ ವಿಕಲತೆಗಳಾದ ಚಪ್ಪೆಕೀಲುತಪ್ಪಿಕೆ ; ಲಟ್ಟಪಾದಗಳನ್ನು ಅಸ್ಥಿವಿಜ್ಞಾನಿತಜ್ಞರು ಶಸ್ತ್ರಕ್ರಿಯೆ ಇಲ್ಲದೆಯೂ ಇಲ್ಲವೆ ಶಸ್ತ್ರಕ್ರಿಯೆ ಮಾಡಿ ಸರಿಪಡಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.

ಎಲುಬಿನ ಕಸಿ ಅಥವಾ ನಾಟಿ : ಕೆಲವು ಸಂದರ್ಭಗಳಲ್ಲಿ ಎಲುಬು ಬೆಳೆಯಲು ಪ್ರೇರಣೆ ಬೇಕಾಗುತ್ತದೆ. ಅದು ಎಲುಬಿನಿಂದಲೇ ಸಿಗುತ್ತದೆ. ಅದನ್ನು ಎಲುಬುನಾಟಿಯ ಮೂಲಕ ಪಡೆಯಬಹುದು. ಎಲುಬಿನೊಳಗಿರುವ ಪೊಳ್ಳು ತುಂಬಲು, ಯಾವುದೋ ಕಾರಣಕ್ಕಾಗಿ ಕೊಯ್ತೆಗೆದ ಎಲುಬಿನ ಭಾಗದಲ್ಲಿ ಬದಲಿಮಾಡುವದಕ್ಕಾಗಿಯೋ ಎಲುಬಿನ ಕಸಿ ಮಾಡಬೇಕಾಗುತ್ತದೆ. ಅದೇ ವ್ಯಕ್ತಿಯ ಇನ್ನೊಂದು ಭಾಗದಿಂದ ಪಡೆದ ಎಲುಬಿನ ನಾಟಿ ಅತ್ಯಂತ ಶ್ರೇಷ್ಠ ಆದರೆ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಎಲುಬು ಬೇಕಾದರೆ ಇನ್ನೊಬ್ಬರ ಎಲುಬನ್ನೇ ಪಡೆಯಬೇಕಾಗುತ್ತದೆ. ಹೀಗಾಗಿ ಎಲುಬಿನ ಬ್ಯಾಂಕ್ ಪ್ರಾರಂಭವಾಯಿತು. ಬೇರೆಯವರಿಂದ ಪಡೆದ ಎಲುಬುಗಳನ್ನು ವಿಕಿರಣತೆಗೊಳಪಡಿಸಿ, ಕೆಡದಂತೆ ಅತಿಶೀತದಲ್ಲಿ ಸಂಸ್ಕರಿಸಿ, ಕೆಡದಂತೆ ಶೇಖರಿಸಿಡುತ್ತಾರೆ. ಇಂತಹವಿಧಾನಗಳನ್ನು ಸಂದರ್ಭಾನುಸಾರ ಬಳಸುತ್ತಾರೆ 

ರಕ್ತದ ಬ್ಯಾಂಕ್, ವೀರ್ಯ ಬ್ಯಾಂಕ್, ಕಣ್ಣಿನ ಬ್ಯಾಂಕ್ಗಳಂತೆ ಎಲುಬಿನ ಬ್ಯಾಂಕ್ ಅಸ್ಥಿ ತಜ್ಞ ಕಾರ್ಯ ನಿರ್ವಹಿಸುವಲ್ಲಿ ಬಹಳ ಸಹಾಯಕವಾಗಿದೆ. ರೋಗಿಗಳಿಗೆ ವರದಾನವಾಗಿದೆ.	(ಎಸ್.ಎಸ್.ಪಿ)

ಎಲುಬಿನ ರೋಗಗಳು, ಗಾಯಗಳು: ಎಲುಬಿನ ರೋಗಗಳು ಅನೇಕ ರೋಗದ ಕಾರಣಗಳೂ ಅನೇಕಾನೇಕ. ಆನುವಂಶಿಕ, ಸಂಜಾತ, ಸೋಂಕು, ಅಪೌಷ್ಠಿಕತೆ, ಗಂತಿಗಳು ಎಲುಬಿನ ರೋಗದ ಕಾರಣಗಳಾಗಬಹುದು. ಕೆಲವು ರೋಗಗಳನ್ನು ತಡೆಗಟ್ಟಬಹುದು, ಕೆಲವುಗಳನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು. ಕೆಲವು ರೋಗಗಳು ಇಲ್ಲಿವರೆಗೆ ವಿಜ್ಞಾನಿಗಳ, ವೈದ್ಯರ ನಿಯಂತ್ರಣಕ್ಕೆ ಬಂದಿಲ್ಲ. ಎಲುಬುಗಳು ರೋಗಕ್ಕೆ ತುತ್ತಾದಾಗ ವಿಕಲತೆ ಉಂಟಾಗುತ್ತದೆ. ವಿಕಲತೆ ಎದ್ದು ಕಾಣುವಂತಾದರೆ ಅಂತಹ ವ್ಯಕ್ತಿಗಳ ದೈಹಿಕ ಸಾಮಥರ್ಯ್‌ ಕಡಿಮೆಯಾಗುತ್ತದೆ. ಇವರು ಸಹಜವಾಗಿಯೇ ಮಾನಸಿಕ ಗೊಂದಲಕ್ಕೊಳಗಾಗುತ್ತಾರೆ. 

ಆನುವಂಶಿಕವಾಗಿ ಕಾಣುವ ಹಲವಾರು ರೋಗಗಳು ಎಲುಬುಗಳಲ್ಲಿ ನ್ಯೂನತೆಯುಂಟು ಮಾಡಿ ವಿಕಲತೆಗೆ ಕಾರಣವಾಗುತ್ತವೆ. ಕೆಲವು ರೋಗಗಳು ಜನನದೊಂದಿಗೆ ಕಂಡರೆ ಕೆಲವು ರೋಗಗಳು ಮೂರು, ನಾಲ್ಕರ ದಶಕದಲ್ಲಿ ಹೊರಬೀಳುತ್ತವೆ. ಲಟ್ಟಪಾದ, ಚಪ್ಪೆಕೀಲತಪ್ಪಿಕೆ, ಎಲುಜನಕ ನ್ಯೂನತೆಗಳು ಮಗುವಿನ ಜನನದೊಂದಿಗೆ ಕಾಣಿಸುವಂಥವುಗಳು. ರುಮಟಾಯ್ಡ್‌ ಕೀಲುರಿತ, ಆಂಕಿಲೋಸಿಂಗ ಸ್ಪಾಂಡಿಲೈಟಿಸ್ ಮೂರು ಅಥವಾ ನಾಲ್ಕರ ದಶಕದಲ್ಲಿ ಕಾಣುವಂತವುಗಳು. ತಲೆತಲಾಂತರಕ್ಕೆ ಬಿಡದೆ ಕಾಡುವ ರೋಗಗಳು ಪ್ರಬಲ (ಡಾಮಿನೆಂಟ್) ವೆಂದು, ಒಂದೊಂದು ತಲೆ ಬಿಟ್ಟು ಬಿಟ್ಟು ಕಾಣುವ ರೋಗಗಳು ದುರ್ಬಲ (ರಿಸೆಸಿವ್) ಸ್ವರೂಪದ್ದೆಂದು ಗುರುತಿಸಿದ್ದಾರೆ.

ಗರ್ಭದಲ್ಲಿ ಪಿಂಡ ಬೆಳೆಯುವ ಮೊದಲ ಮೂರು ತಿಂಗಳ ಸಮಯದಲ್ಲಿ ತಾಯಿ ಕೆಲವೊಂದು ಔಷಧಗಳನ್ನು ಸೇವಿಸಿದರೆ, ಎಕ್ಸ್‌ಕಿರಣ ಅಥವಾ ಇನ್ನಿತರ ವಿಕಿರಣತೆಗೆ ಒಳ ಪಟ್ಟರೆ ಹುಟ್ಟುವ ಮಗು ವಿಕಲವಾಗುವ ಸಂಭವ ಇದೆ. ವಿಕಲತೆಯ ಸ್ವರೂಪ ಬಹು ವಿಧವಾಗಿ ಕಾಣಿಸಿಕೊಳ್ಳಬಹುದು. ಅಂಗಭಾಗದ ಕೊರತೆ ಇರುವುದೇ ಹೆಚ್ಚು. ಕೆಲವೊಮ್ಮೆ ಹೆಚ್ಚಿನ ಅಂಗಭಾಗ ಕಾಣಿಸಿಕೊಳ್ಳಲೂಬಹುದು.

ಸಂಶೋಧನೆ ಮುಂದುವರೆದಂತೆ ವಿಕಲತೆಯುಂಟುಮಾಡುವ ಕಾರಣ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಕ್ರೋಮೊಸೋಮುಗಳಲ್ಲಿಯ ನ್ಯೂನತೆ ಕಂಡು ಕೊಂಡು ಸರಿಪಡಿಸುವ ಪ್ರಯತ್ನಗಳು ನಡೆದಿವೆ ಹೀಗಾಗಿ ಮುಂದೊಂದು ದಿನ ಆನುವಂಶಿಕ ರೋಗಗಳನ್ನು ಕಾಣುವುದು ಕಷ್ಟವಾಗಬಹುದು. ಸಂಜಾತ ರೋಗಗಳ ಕಾರಣಗಳು ಗೊತ್ತಾಗುತ್ತಿರುವುದರಿಂದಾಗಿ ಅವುಗಳನ್ನು ಸಹ ತಡೆಗಟ್ಟಲು ಪ್ರಯತ್ನಗಳು ನಡೆದಿವೆ. ಕಂಡುಬಂದ ವಿಕಲತೆಗಳಲ್ಲಿ ಕೆಲವನ್ನು ಚಿಕಿತ್ಸೆಯಿಂದ ಸರಿಪಡಿಸಬಹುದು.

ಸಣ್ಣ ಪೆಟ್ಟು ತಗುಲಿದರೆ ಸುಲಭವಾಗಿ ಸೀಳುವ, ಮುರಿಯುವ ಮೂಳೆಗಳೊಂದಿಗೆ ಮಗುವಿನ ಜನನವಾಗಬಹುದು. ಇಂತಹ ನ್ಯೂನತೆ ಮಗು ಬೆಳೆಯುವಾಗ ಸಹ ಕಾಣಿಸಿಕೊಳ್ಳಬಹುದು. ಇದಕ್ಕೆ “ಎಲುಜನನ ನ್ಯೂನತೆ” (ಆಸ್ಪಿಯೋಜನಿಸಿಸ್ ಇಂಪರ್ಪೆಕ್ಟ) ಎನ್ನುತ್ತಾರೆ. 

ಕೆಲವೊಮ್ಮೆ ಎಲುಬಿನೊಳಗಣ ಮಜ್ಜೆಯ ಭಾಗವೆಲ್ಲ ಗಟ್ಟಿಗಡುಸಾಗಿ ಹಾಲುಗಲ್ಲಿನಂತಾಗಿರುತ್ತದೆ. ಇವು ಸಹ ಸ್ವಲ್ಪ ಪೆಟ್ಟಿನಿಂದಾಗಿ ಮುರಿಯುತ್ತವೆ. ಇದಕ್ಕೆ ‘ಎಲುಕಲ್ಲು ರೋಗ’ (ಆಸ್ಬಿಯೋ ಪೆಟ್ರೋಸಿಸ್) ಎನ್ನುತ್ತಾರೆ. ಮೂಳೆಯ ಬದಲಾಗಿ ಮೆದುವಾದ ತಂತುವಿನ ಊತಕ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಫೈಬ್ರೋಸಡಿಸಪ್ಲೇಸಿಯ ಎನ್ನುತ್ತಾರೆ.

ಕೆಲವೊಮ್ಮೆ ಮೇಲೆಲುಮೊಳೆ (ಎಪಿಫೈಸಿಸ್) ಉರಿತಕ್ಕೊಳಗಾಗಿ ಅದರ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ. ಲೆಗ್-ಪಿರ್ಥಿ ರೋಗದಲ್ಲಿ ತೊಡೆಲುತಲೆಯ ಮೇಲೆಲುಮೊಳೆ ಉರಿತಕ್ಕೊಳಗಾಗಿ ಚಪ್ಪೆ ಕೀಲನ್ನು ಹಾಳುಗೆಡುವುದುಂಟು. ಇಂತಹ ನ್ಯೂನತೆ ಇನ್ನೂ ಅನೇಕ ಬೆಳೆವಮೂಳೆಗಳಲ್ಲಿ ಕಂಡುಬರುತ್ತವೆ. ಒಮ್ಮೊಮ್ಮೆ ಬೆಳೆದ ಮೂಳೆ ನಿಧಾನವಾಗಿ ಕರಗುವದನ್ನೂ ಕಾಣಬಹುದು. ಇದಕ್ಕೆ ಮೂಳೆಲಯ (ಆಸ್ಟಿಯೋಲೈಸಿಸ್) ಎನ್ನುತ್ತಾರೆ.

ಚಪ್ಪೆಕೀಲಿನ ಎಲಬುಗಳು ತಮ್ಮ ಸಹಜರೂಪದಿಂದ ವಂಚಿತವಾದ ಮಗುವಿನಲ್ಲಿ ಚಪ್ಪೆಕೀಲ್ತಪ್ಪಿಕೆಯುಂಟು ಮಾಡುತ್ತವೆ. ಲಟ್ಟಪಾದ, ತಾಗುಮಂಡಿ, ಪಂಗಡಕಾಲುಗಳು ಸಾಮಾನ್ಯವಾಗಿ ಕಾಣುವ ಮೂಳೆಯ ಊನಗಳು. ಅನೇಕ ಊನಗಳನ್ನು ಸಣ್ಣದರಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಒಳ್ಳೆಯ ಫಲ ಸಿಗುತ್ತದೆ.
ಜೀವಸ್ತುಕರಣದ ಏರುಪೇರುಗಳು: ಮೈಯಲ್ಲಿಯ ಮೂಳೆಗಳಲ್ಲಿ ಜೀವ ಇರುತ್ತದೆ ಎಡೆಬಿಡದೆ ಒಂದೆಡೆ ಮೂಳೆ ಹಾಳಾಗುತ್ತಿದ್ದರೆ ಇನ್ನೊಂದೆಡೆ ಅದೇ ಹೊತ್ತಿನಲ್ಲಿ ಹೊಸ ಮೂಳೆ ಚುರುಕಾಗಿ ಬೆಳೆಯುತ್ತಿರುತ್ತದೆ. ಆರೋಗ್ಯವಂತರಲ್ಲಿ ಇವೆರಡು ಕೆಲಸಗಳು ಸಮಸಮವಾಗಿರುತ್ತವೆ. ಜೀವಸ್ತುಕರಣ ಕ್ರಿಯೆಯನ್ನು ಕೆಡಿಸುವ ರೋಗಗಳ ಪ್ರಭಾವ ಎಲುಗಟ್ಟಿನ ಮೇಲೂ ಆಗುತ್ತದೆ. ‘ಸಿ’ ಮತ್ತು ‘ಡಿ’ ಜೀವಸತ್ವಗಳ ಕೊರತೆಯಲ್ಲಿ ಕ್ರಮವಾಗಿ ನೀಚಗೊರೆ (ಸ್ಕರ್ವಿ). ಎಲುಮುರುಟು (ರಿಕೆಟ್ಸ್‌) ಕಾಣಿಸಿಕೊಳ್ಳುತ್ತವೆ. ಗುರಾಣಿಕ (ತೈರಾಯ್ಡ್‌) ಬದಿಗುರಾಣಿಕ (ಪ್ಯಾರಾ ತೈರಾಯ್ಡ್‌) ಗ್ರಂಥಿ, ಮೂತ್ರಪಿಂಡ, ಜಠರಗರುಳಿನ ನಾಳ, ಅಡ್ರಿನಲ್ ಗ್ರಂಥಿüಗಳ ಕೆಲಸ ಕೆಟ್ಟರೆ ಮೂಳೆಯಲ್ಲಿ ಬದಲಾವಣೆ ಕಾಣಬಹುದು. ಇಷ್ಟೇಅಲ್ಲ ಯಾವುದೇ ಕಾರಣದಿಂದಾಗಿ ವ್ಯಕ್ತಿ ಓಡಾಡದೆ ಹಾಸಿಗೆ ಹಿಡಿದರೆ ಮೂಳೆಗಳು ಮೆತ್ತಗಾಗುತ್ತವೆ. 

ಮೈ ಕಟ್ಟಿನಲ್ಲಿ ಆದ ಏರುಪೇರು ಕಂಡಹಾಗೆ, ಎಲುಗಟ್ಟಿನ ಸಹಜ ನಿಜಗೆಲಸ ಕೆಡುವುದಿಲ್ಲ. ಮರುರಚನೆಗೂ, ಹಾಳುಗೆಡುವದಕ್ಕೂ ನಡುವಣ ಪರಿಮಾಣ ಬದಲಾದ ಹಾಗೆಲ್ಲ ಕೊನೆಗೆ ಉಳಿವ ಮೂಳೆಯ ಮೊತ್ತವು ಕಡಮೆ ಆಗುವುದನ್ನು ಬಿಟ್ಟರೆ ಮೂಳೆಗೆ ವಯಸ್ಸು ಏನೂ ತಟ್ಟದು. ಮೂಳೆಯ ರಾಸಾಯನಿಕ ಸಂಯೋಜನೆ ಒಂದೇ ಸಮನಾಗಿದ್ದರೂ ಇಡೀ ಎಲುಗಟ್ಟು ಹಗುರವೂ ಕೋಮಲವೂ ಆಗುವುದು. ಹೀಗಾಗಿ ವಯಸ್ಸಾದವರ ಮೂಳೆ ಸುಲಭವಾಗಿ ಲೊಟಕ್ಕೆಂದು ಮುರಿಯುವವು ಮತ್ತು ಮುರಿತ ತನ್ನಷ್ಟಕ್ಕೆ ತಾನೇ ಸರಿಹೊಂದುತ್ತದೆ. 
ಸೋಂಕು: ಎಲುಬಿನ ಸೋಂಕು ರೋಗಕ್ಕೆ ಎಲುಮಜ್ಜೆಯುರಿತ (ಆಸ್ಪಿಯೋಮೈಲೈಟಿಸ್) ಎನ್ನುತ್ತಾರೆ. ಕೀವು ಸೃಜಿಸುವ ರೋಗಾಣುಗಳಾದ ಸ್ಪ್ರೆಪ್ಟ್ರೋಕಾಕೈ, ಸ್ಟ್ಸಾಫಿಲೋಕಾಕೈಗಳು ಸಾಮಾನ್ಯವಾಗಿ ಎಲು ಮಜ್ಜೆಯುರಿತವನ್ನುಂಟುಮಡುತ್ತವೆ. ಇದು ತೀವ್ರ (ಆಕ್ಯುಟ್) ಇಲ್ಲವೆ ನಿಧಾನ (ಕ್ರಾನಿಕ್) ಸ್ವರೂಪದ್ದಾಗಿರಬಹುದು. ತೀವ್ರವಾಗಿದ್ದನ್ನು ಕೂಡಲೆ ಕಂಡು ಉಪಚರಿಸಿದರೆ ನಿಧಾನವಾಗುವದನ್ನು ತಡೆಗಟ್ಟಬಹುದಲ್ಲದೆ ಮಗುವಿನ ಪ್ರಾಣ ಹಾನಿಯನ್ನೂ ತಡೆಗಟ್ಟಬಹುದು. ನಿಧಾನ ರೋಗವಾಗಿ ಮಾರ್ಪಟ್ಟಾಗ ಕೀಲಿನೆಲುವು ಕರಗುತ್ತದೆ; ಒಂದು 
ಚೂರು ಆಥವಾ ದೊಡ್ಡದಾಗಿಯೇ ಎಲುಬು ಸಾಯುತ್ತದೆ ಇದಕ್ಕೆ ‘ಹೊರಚಿಕ’ (ಸಿಕ್ವೆಸ್ಟ್ರಮ್) ಎನ್ನುತ್ತಾರೆ. ರಗಟೆಲುವಿನಲ್ಲಿ ತೂತುಗಳುಂಟಾಗಿ ಕೀವು ಸೋರುತ್ತದೆ. ಇಂದಿನ ದಿನಗಳಲ್ಲಿ ಇಂತಹದು ಕಾಣುವುದು ಅಪರೂಪ. ಪೆನ್ಸಿಲಿನ್ ಅಲ್ಲದೆ ಅನೇಕ ಬಲಯುತವಾದ ಜೀವಿರೋಧಕ (ಅಂಟಿಬಂiÀÄಟಿಕ್) ಮದ್ದು ಲಭ್ಯವಾಗಿ ಚಿಕಿತ್ಸೆ ಸರಳವಾಗಿದೆ. ಕೆಲವೊಮ್ಮೆ ಶಸ್ತ್ರ್ರಕ್ರಿಯೆ ಆನಿವಾರ್ಯ.

ಗಂತಿಗಳು: ಬೇರೆ ಬೇರೆ ಅಂಗಗಳಲ್ಲಿ ಗಂತಿಗಳು ಕಂಡುಬರುವಷ್ಟು ಮೂಳೆಗಳಲ್ಲಿ ಕಾಣಿಸುವುದು ಸಾಮಾನ್ಯವಲ್ಲ. ಮೂಳೆಯಗಂತಿಗಳಲ್ಲಿ ಹೆಚ್ಚಿನವು ಸೌಮ್ಯ (ಬಿನೈನ್) ಗಂತಿಗಳಾಗಿರುತ್ತವೆ. ಮತ್ತು ಇವು ಶಸ್ತ್ರಕ್ರಿಯೆಗೆ ಮಣಿಯುತ್ತವೆ. ಪ್ರಾಥಮಿಕ ಗಂತಿಗಳಿಗಿಂತ ‘ಗುಳೆಗಂತಿ’ (ಸೆಕೆಂಡರಿ) ಮೂಳೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತವೆ. ಪುಪ್ಫುಸ, ಮುನ್ನಿಲುಗ (ಪ್ರಾಸ್ಟೇಟ್), ಗರ್ಭಕೋಶ, ತರಡು, ಕರುಳು ಮತ್ತಿತರ ಅಂಗಗಳ ಗಂತಿಗಳು ಮೂಳೆಗಳಿಗೆ ಹರಡುತ್ತವೆ, ನೋವುಂಟು ಮಾಡುತ್ತವೆ, ಅಂಗದ ಆಕಾರ ಕೆಡಿಸುತ್ತವೆ. ಇವುಗಳ ಚಿಕಿತ್ಸೆ ಕಷ್ಟವಾದರೂ ಇಂದು ವೈಜ್ಞಾನಿಕ ಪ್ರಗತಿಯಿಂದಾಗಿ, ವಿಕಿರಣ ಚಿಕಿತ್ಸೆ, ಕೀಮೊಥೆರಪಿ ನೀಡಿ, ರಕ್ತ ಪುರಣೆ ಕೊಟ್ಟು ಗಂತಿಯನ್ನು ಗಂತಿಯ ಕೆಡಕನ್ನು ನಿಯಂತ್ರಿಸಲು ಸಾದ್ಯವಾಗುತ್ತಿದೆ. 
ಮೂಳೆಗಳಲ್ಲಿ ಪ್ರಾಥಮಿಕವಾಗಿ ಏಳುವ ಗಂತಿಗಳಿಗೆ ಮಾಂಸಗಂತಿ (ಸಾರ್ಕೋಮ) ಗಳೆನ್ನುತ್ತಾರೆ. ಎಲುಬಿನ, ಮೆಲ್ಲೆಲುವಿನ, ಮತ್ತು ತಂತುಗಳ ಪ್ರಬಲತೆಯಿರುವ ಮೂಳೆಯ ಗಂತಿಗಳನ್ನು ಗುರಿತಿಸಲಾಗಿದೆ. ಎಲುಜನಕ ಗಂತಿಯಲ್ಲಿ ಎಲುಬಿನ ಭಾಗವೇ ಪ್ರಮುಖವಾಗಿ ಕಾಣಿಸುತ್ತದೆ. ಇದು ಹದಿಹರೆಯದವರಲ್ಲಿ, ಸುಮಾರು ಎರಡು ದಶಕದ ವಯಸ್ಸಿನವರÀಲ್ಲಿ ಕಾಣಿಸುತ್ತದೆ. ಎಂತಹ ಪ್ರಬಲ ಉಪಚಾರದಿಂದಲೂ, ಅಂಗವನ್ನೇ ಕಳೆದುಕೊಂಡ ಜೀವ ಬದುಕಿಸುವುದು ಕಷ್ಟವಾಗುತ್ತದೆ. 

ಇವಿಂಗ್ಸನ ಮಾಂಸಗಂತಿ, ಮೆಲ್ಲೆಲುವಿನಮಾಂಸಗಂತಿ, ತಂತುಮಾಂಸಗಂತಿಗಳು ವಿನಾಶಕಾರಕಗಳು. ಎಲುಬಿನಲ್ಲಿ ಮಧ್ಯವಯಸ್ಸಿನ ಸುಮಾರಿಗೆ ಕಾಣಿಸುವ ರಾಕ್ಷಸಕಣಗಂತಿ (ಆಸ್ಟಿಯೋಕ್ಲಾಸ್ಪೋಮ) ಸ್ಥಳೀಯವಾಗಿ ಕೆಲವೊಮ್ಮೆ ಅಪಾಯಕಾರಿಯಾಗಿ ಕಂಡರೂ ವ್ಯಕ್ತಿಯ ಜೀವಕ್ಕೆ ಅಪಾಯವಿರುವುದಿಲ್ಲ.

ನೀರಿನಲ್ಲಿ ಪ್ಲೋರಿನ್ ಪ್ರಮಾಣ ಹೆಚ್ಚಾಗಿದ್ದಾಗ ಅದರ ಪರಿಣಾಮವನ್ನು ತಂತುಗಟ್ಟುಗಳಲ್ಲಿ ಮತ್ತು ಮೂಳೆ ಕೀಲುಗಳಲ್ಲಿ ಕಾಣಬಹುದು. ಮಕ್ಕಳು ಇಂತಹ ನೀರನ್ನು ಕುಡಿಯುತ್ತಿದ್ದರೆ ಅವರ ಹಲ್ಲುಗಳು ಹಳದಿಯಾಗುತ್ತವೆ. ಸರಿಯಾಗಿ ಬೆಳೆಯುವುದಿಲ್ಲ. ಕಾಲುಗಳು ಬಾಗಿ ತಾಗುಮಂಡಿ ಇಲ್ಲವೆ ಪಂಗಡಗಾಲು ವಿಕಲತೆ ಫಲಿಸುತ್ತದೆ. ದೊಡ್ಡವರಲ್ಲಿ ಸೊಂಟನೋವು ಮೈಕೈನೋವು ಸಾಮಾನ್ಯ. ಎಕ್ಸ್‌ಕಿರಣದ ಚಿತ್ರದಿಂದ ಇದನ್ನು ಗುರುತಿಸಬಹುದು. ಇದಕ್ಕೆ ತಕ್ಕ ಚಿಕಿತ್ಸೆ ಇಲ್ಲ, ಪ್ಲೋರಿನ್ ಯುಕ್ತ ನೀರಿನ ಬಳಕೆ ಬಿಡುವುದರಿಂದ ಇದು ಬರದಂತೆ ಮಾಡುವುದೇ ಉಪಾಯ.

ಮುರಿತಗಳು: ಮೈಯಲ್ಲಿ ಬಲುಗಟ್ಟಿಯಾದ ಊತಕ ಎಲುಬು. ಅದು ಮುರಿಯುವುದು ಸಾಕಷ್ಟು ಬಲವಾದ ಪೆಟ್ಟಿನಿಂದ ಮಾತ್ರ. ಆದರೆ ರೋಗದಿಂದ ಮೆತ್ತಗಾದ ಮೂಳೆ, ಮುಪ್ಪಿನಿಂದ ತೆಳುವಾದ ಮೂಳೆ, ಹೆಂಗಸರಲ್ಲಿ ಮುಟ್ಟು ನಿಂತನಂತರದ ಬಲಹೀನ ಮೂಳೆಗಳು ಅಲ್ಪ ಸ್ವಲ್ಪ ಪೆಟ್ಟಿನಿಂದಾಗಿ ಮುರಿಯಬಹುದು. ಮುರಿದ ಎಲುಬಿನ ತುದಿ ಚರ್ಮದ ಗಾಯದಿಂದ ಗಾಳಿಗೊಡ್ಡುವಂತಾದರೆ ಅದಕ್ಕೆ ತೆರೆದ ಮುರಿತ (ಓಪನ್) ಇಲ್ಲವೆ ಕಲೆತ ಮುರಿತ (ಕಾಂಪೌಂಡ್)ವೆನ್ನುತ್ತಾರೆ; ಇಲ್ಲವಾದರೆ ಆದು ಮುಚ್ಚಿದ ಮುರಿತ ಅಥವಾ ಸರಳ ಮುರಿತವಾಗುತ್ತದೆ. ಮೂಳೆಮುರಿತ ಪತ್ತೆ ಮಾಡುವುದು ಕಷ್ಟವಾಗುವುದಿಲ್ಲ. ಪೆಟ್ಟಿಗೊಳಗಾದ ಭಾಗದಲ್ಲಿ ನೋವಿರುತ್ತದೆ. ಆ ಭಾಗವನ್ನು ಮುಟ್ಟಿದರೆ ನೋವು ಉಲ್ಬಣವಾಗುತ್ತದೆ ಮುರಿತದ ಭಾಗವನ್ನು ಅಲುಗಾಡಿಸಿದರೆ ಕರ್ ಕರ್ ಶಬ್ದ ಕೇಳಿಸಬಹುದು. ಇಲ್ಲವೆ ಪರೀಕ್ಷಿಸುವ ಕೈ ಅನುಭವಿಸಬಹುದು. ಮುರಿತಕ್ಕೊಳಗಾದ ಕೈ ಅಥವಾ ಕಾಲು ಡೊಂಕಾಗುತ್ತದೆ. ಎಕ್ಸರೇ ಚಿತ್ರ ಗಮನಿಸಿದರೆ ಎಲುಬು ಎಲ್ಲಿ ಮುರಿದಿದೆ, ಹೇಗೆ ಮುರಿದಿದೆ, ಯಾವ ಭಾಗಕ್ಕೆ ಮುರಿದೆಲುಬುಗಳು ಸರಿದಿವೆ ಎನ್ನುವ ವಿವರಗಳು ತಿಳಿಯುತ್ತವೆ. ಅದರಿಂದ ಮುರಿತದ ಚಿಕಿತ್ಸೆ ಸರಳವಾಗುತ್ತದೆ. 
ಮುರಿದೆಲುಬನ್ನು ಸರಿಕೂಡಿಸುವುದು; ಕೂಡಿಸಿದ ಎಲುಬುಗಳನ್ನು ಚೆನ್ನಾಗಿ ಕೂಡಿಕೊಳ್ಳುವತನಕ ಹಾಗೇ ಹಿಡಿದಿಡುವುದು, ಮತ್ತು ಅದೇ ಸಮಯದಲ್ಲಿ ಹಿಡಿದಿಡದ ಕೀಲುಗಳನ್ನು ಆಡಿಸುತ್ತಿರುವುದು ಎಲುಮುರಿತದ ಚಿಕಿತ್ಸೆಯ ಪ್ರಮುಖ ಅಂಶಗಳು. ಮಕ್ಕಳಲ್ಲಿ ಮೂಳೆಗಳು ಹಸಿರು ಕಡ್ಡಿಯಂತೆ (ಗ್ರೀನ್ ಸ್ಟಿಕ್) ಮುರಿದು ಬಾಗುತ್ತವೆ. ಮಕ್ಕಳ ಮೂಳೆ ಮುರಿದರೂ ಸರಿಕೂಡಿಕೊಳ್ಳುತ್ತವೆ. ಅಲ್ಪ ಸ್ವಲ್ಪ ದೋಷವಿದ್ದರೂ ಬೆಳೆಯುವ ಮೂಳೆಗಳಾದುದರಿಂದ ತಾವಾಗಿಯೇ ಸರಿಹೊಂದುತ್ತವೆ. ದೊಡ್ಡವರಲ್ಲಿ ಮುರಿದ ಮೂಳೆಗಳನ್ನು ಅರಿವಳಿಕದ ಸಹಾಯದಿಂದ ಸರಿಕೂಡಿಸಿ ಪ್ಲಾಸ್ಟ್‌ರ್ ಆಫ್ ಪ್ಯಾರಿಸ್ ಅಚ್ಚು (ಪ್ಲ್ಯಾಸ್ಟರ್ಕಾಸ್ಟ್‌) ಹಾಕಿ ಕೆಲವು ವಾರಗಳ ವರೆಗೆ ಹಿಡಿದಿಡಬೇಕಾಗುತ್ತದೆ. ಸರಿಕೂಡಿಸಲು ಸಾಧ್ಯವಾಗದಾದಾಗ, ಅಥವಾ ಸಾಧ್ಯವಿಲ್ಲವೆನ್ನುವ ಸಂದರ್ಭಗಳಲ್ಲಿ ಶಸ್ತ್ರಕ್ರಿಯೆ ಮಾಡಿ, ಮುರಿದು ಸರಿದ ಎಲುಬುಗಳನ್ನು ಸರಿಕೂಡಿಸಿ, ಕೂಡಿಸಿದ್ದನ್ನು ಒಳೆಲುಮೊಳೆ, (ಇಂಟ್ರಾಮೆಡುಲರಿನೇಲ್) ತಂತು; ತೂತುತಟ್ಟೆ (ಪ್ಲೇಟ್) ಯಿಂದ ಹಿಡಿದಿಡಬೇಕಾಗುತ್ತದೆ. ಇಂದಿನ ವ್ಯೆಜ್ಞಾನಿಕ ಪ್ರಗತಿಯ ದಿನಗಳಲ್ಲಿ ಶಸ್ತ್ರಕ್ರಿಯೆ ಸರಳವಾಗಿ ನಾನಾ ತರಹದ ಶಸ್ತ್ರಕ್ರಿಯೆಗಳು ಬಳಕೆಯಲ್ಲಿ ಬಂದು, ರೋಗಿ ಹಾಸಿಗೆ ಹಿಡಿದು ಮಲಗುವುದು ತಪ್ಪಿ ಸ್ಪಲ್ಪ ಸಹಾಯದೊಂದಿಗೆ ಆದಷ್ಟು ಕೂಡಲೇ ಸ್ವತಂತ್ರವಾಗಿ ಓಡಾಡುವಂತಾಗಲು ಸಾಧ್ಯವಾಗಿದೆ. 

ಶಸ್ತ್ರ ಕ್ರಿಯೆಯಿಂದಾದ ಗಾಯ ಸೋಂಕಿಗೊಳಗಾಗಿ ಕೀವುಂಟಾಗುವುದು ಅಪರೂಪವಾಗಿದೆ. ಸ್ವಚ್ಛತೆ, ಕ್ರಿಮಿರಹಿತತೆ, ಜೀವಿರೋದಕ ಔಷಧಗಳು, ಶಸ್ತ್ರಕ್ರಿಯಾ ತಂತ್ರ ಶಸ್ತ್ರಮಂದಿರ (ಆಪರೇಶನ್ ಥೇಟರ್)ದಲ್ಲಿಯ ಉತ್ತಮ ಸೌಕರ್ಯಗಳು ಮತ್ತು ನುರಿತ ದಾದಿಯರ ಸಹಕಾರ ಎಂತಹದೇ ಗಂಭೀರವಾದ ಮೂಳೆ ಮುರಿತದ ಚಿಕಿತ್ಸೆಯನ್ನು ಸರಳಗೊಳಿಸಿವೆ. ರಷ್ಯದ ವೈದ್ಯ ಎಲಿಜಾರೋವ್ ಎಂಬಾತ ಮೂಳೆಯಲ್ಲಿ ತೆಳು ತಂತಿಗಳನ್ನು ಸೇರಿಸಿ ಆ ತಂತಿಗಳನ್ನು ಅಂಗಭಾಗದ ಹೊರಗೆ ಅರ್ಧ ಉಂಗುರಗಳ ಮೂಲಕ ಹಿಡಿದು ಉಪಚರಿಸುವ ಪದ್ದತಿ ರೂಢಿಯಲ್ಲಿ ತಂದು ಮೂಳೆ ಚಿಕಿತ್ಸೆಯಲ್ಲಿ ಹೊಸತನ ನೀಡಿದ್ದಾರೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ